ಜಮ್ರ್ಯಾನಿಕ್ ಜನಾಂಗ -
ಈ ಜನಾಂಗದವರು ಇಂಡೊ-ಯೂರೋಪಿಯನ್ ಬುಡಕಟ್ಟಿನವರು; ಇವರ ಭಾಷೆ ಸಹ ಇಂಡೊ-ಯೂರೋಪಿಯನ್ ಗುಂಪಿನ ಭಾಷೆ. ಇವರನ್ನು ಟ್ಯೂಟಾನಿಕ್ ಜನಾಂಗವೆಂದೂ ಕರೆವುದಿದೆ. ಇವರ ಉಗಮ ಚರ್ಚಾಸ್ಪದವಾದದ್ದು. ಕಂಚಿನ ಯುಗದ (ಕ್ರಿ. ಪೂ. ಸು. 500-400) ಕೊನೆಯಿಂದ ಕ್ರಿ. ಪೂ. 2ನೆಯ ಶತಮಾನದ ಮಧ್ಯಭಾಗಕ್ಕೆ ಸಂಬಂಧಪಟ್ಟಂತೆ ನಡೆದಿರುವ ಪುರಾ ವಸ್ತುಸಂಶೋಧನೆಗಳಲ್ಲಿ ಈ ಜನಾಂಗಕ್ಕೆ ಸಂಬಂಧಿಸಿದ ಸಾಕಷ್ಟು ಆಧಾರಗಳು ಉತ್ತರ ಜರ್ಮನಿ ಮತ್ತು ದಕ್ಷಿಣ ಸ್ವೀಡನ್‍ಗಳಲ್ಲಿ ಸಿಕ್ಕಿಲ್ಲವಾಗಿ ಇವರ ಬಗ್ಗೆ ಖಚಿತ ಅಭಿಪ್ರಾಯಗಳಿಗೆ ಅವಕಾಶವಿಲ್ಲ. ಕಂಚಿನ ಯುಗದ ಕೊನೆಯಲ್ಲಿ ಇವರು ಆ ಪ್ರದೇಶಗಳನ್ನು ಮತ್ತು ಹಾಟ್ರ್ಸ್ ಪರ್ವತ ಪ್ರದೇಶಗಳನ್ನು ಆಕ್ರಮಿಸಿ ಕೊಂಡಿದ್ದರೆಂದು ಊಹಿಸಬಹುದು.
ಜಮ್ರ್ಯಾನಿಕ್ ಜನಾಂಗದ ಬಣಗಳು ಅನೇಕವಿದೆ. ವಾಂಡಲರು, ಗೆಪಿಡೆ, ಮತ್ತು ಗಾತ್ ಜನ ಕ್ರಿಸ್ತಪೂರ್ವದ ಕೊನೆಕೊನೆಯ ವರ್ಷಗಳಲ್ಲಿ ದಕ್ಷಿಣ ಸ್ವೀಡನ್ನಿನಿಂದ ವಲಸೆ ಬಂದು ಓಡರ್ ಮತ್ತು ವಿಸ್ಟಲ ನದಿಗಳ ದಕ್ಷಿಣ ಬಾಲ್ಟಿಕ್ ತೀರ ಮತ್ತು ಪಸಾರ್ಜ್ (ಪಾಸ್ಲೆಕ್) ನದಿಯಾಚೆಯ ಭಾಗಗಳನ್ನು ಆಕ್ರಮಿಸಿಕೊಂಡರು. ಇದಕ್ಕೆ ಹಿಂದೆಯೇ ಕೆಲ್ಟಿಕ್ ಬಣಗಳಿಗೆ ಅಡಚಣೆಯಾಗುವಂತೆ ದಕ್ಷಿಣ ಮತ್ತು ಪಶ್ಚಿಮ ಭಾಗಗಳತ್ತ ವಲಸೆಗಳು ಸಾಗಿದ್ದುವು. ಕೆಲ್ಟಿಕ್ ಜನ ಆಗ ಪಶ್ಚಿಮ ಜರ್ಮನಿಯ ಬಹುಭಾಗಗಳಲ್ಲಿ ವಾಸಿಸುತ್ತಿದ್ದರು. ಉದಾಹರಣೆಗೆ, ಹೆಲ್ವೀಷೀ ಬಣದ ಜನ ಕ್ರಿ. ಪೂ. 1ನೆಯ ಶತಮಾನದಲ್ಲಿ ಸ್ವಿಟ್ಜರ್ಲೆಂಡ್ ಭಾಗದಲ್ಲಿದ್ದವರು ಒಂದು ಸಮಯದಲ್ಲಿ ಮೇನ್ ನದಿಯವರೆಗೂ ಹರಡಿಕೊಂಡಿದ್ದರು.

ಜಮ್ರ್ಯಾನಿಕ್ ಜನ ರೋಮನರೊಡನೆ ಪ್ರಥಮ ಬಾರಿ ಸಮರಕ್ಕೆ ನಿಂತಿದ್ದು ಕ್ರಿ. ಪೂ. 2ನೆಯ ಶತಮಾನದಲ್ಲಿ. ಆಗ ಸಿಂಬ್ರಿ ಮತ್ತು ಟ್ಯೂಟಾನಿಕ್ ಜನ ದಕ್ಷಿಣ ಗಾಲ್ ಮತ್ತು ಉತ್ತರ ಇಟಲಿ ಪ್ರದೇಶಗಳ ಮೇಲೆ ದಾಳಿ ನಡೆಸಿದ ಕಾರಣ, ಕ್ರಿ. ಪೂ. 102 ಮತ್ತು 101ರಲ್ಲಿ ರೋಮ್ ದಂಡನಾಯಕ ಮರೀಯಸ್ ಅವರನ್ನು ಅಡಗಿಸಿದ. ಜೂಲಿಯಸ್ ಸೀಜರನ ಕಾಲದ ಹೊತ್ತಿಗೆ (ಕ್ರಿ. ಪೂ. 1ನೆಯ ಶತಮಾನ) ಜರ್ಮನರು ರೈನ್ ನದಿಯ ಪಶ್ಚಿಮ ಭಾಗದಲ್ಲಿ ನೆಲೆಸಿದ್ದವರು ದಕ್ಷಿಣದಲ್ಲಿ ಡ್ಯಾನ್ಯೂಬ್ ನದಿಯವರೆಗೆ ವ್ಯಾಪಿಸಿಕೊಂಡಿದ್ದರು.

ಗ್ರೀಕ್ ನಾವಿಕ ಪಿತಿಯಾಸನ (ಕ್ರಿ. ಪೂ. 4ನೆಯ ಶತಮಾನ) ಕಾಲದಿಂದ ಪ್ರವಾಸಿಗರು ಉತ್ತರದ ಟ್ಯೂಟಾನಿಕ್ ದೇಶಗಳಿಗೆ ಹೋಗಿ ಬರುತ್ತಿದ್ದರು. ಆದಾಗ್ಯೂ ಜಮ್ರ್ಯಾನಿಕ್ ಜನ ಮತ್ತು ಕೆಲ್ಟ್ ಜನ ಪ್ರತ್ಯೇಕ ಜನಾಂಗದವರೆಂಬುದು ಕ್ರಿ. ಪೂ. 1ನೆಯ ಶತಮಾನದವರೆಗೆ ರೋಮನರಿಗೆ ತಿಳಿದಿರಲಿಲ್ಲ. ಅವರು ಪ್ರತ್ಯೇಕ ಜನರೆಂದು ಜೂಲಿಯಸ್ ಸೀಜûರ್ ತಿಳಿಸುತ್ತಾನೆ. ರೈನ್ ನದಿಯ ಪಶ್ಚಿಮಕ್ಕೆ ನುಗ್ಗಿದ ಜರ್ಮನರನ್ನು ರೋಮ್ ಚಕ್ರಾಧಿಪತ್ಯದ ಗಡಿಗಳಲ್ಲಿ ಸಂಘಟಿಸಿದವ ಸೀಜûರ್. ಜರ್ಮನರ ಸಂಸ್ಕøತಿಯ ಬಗ್ಗೆ ಆತ ಕೊಟ್ಟರುವ ಮಾಹಿತಿ ದೊರಕಿರುವ ವಿವರಣೆಗಳಲ್ಲೆಲ್ಲ ಅತಿ ಪ್ರಾಚೀನವಾದದ್ದು. ಕ್ರಿ. ಪೂ. 9ರಲ್ಲಿ ರೋಮನರು ರೈನ್ ನದಿಯ ಬಳಿಯ ತಮ್ಮ ಪೂರ್ವಗಡಿಯನ್ನು ಎಲ್ಬ್ ನದಿಯವರೆಗೆ ವಿಸ್ತರಿಸಿದರು. ಅವರ ಅಧೀನರಾಗಿ ಹೋಗಿದ್ದ ಜಮ್ರ್ಯಾನಿಕ್ ಜನ ಕ್ರಿ. ಶ. 9ರಲ್ಲಿ ಆರ್ಮಿನಿಯಸ್ (ಕ್ರಿ. ಪೂ. 17ರಿಂದ ಕ್ರಿ. ಶ. 21) ಎಂಬಾತನ ನಾಯಕತ್ವದಲ್ಲಿ ದಂಗೆಯೆದ್ದು ರೋಮ್ ಸಾಮ್ರಾಜ್ಯದ ಆಕ್ರಮಣ ಸೈನ್ಯಗಳನ್ನು ಟ್ಯೂಟೊಬರ್ಗ್ ಅರಣ್ಯದಲ್ಲಿ ಸಂಪೂರ್ಣವಾಗಿ ಸೋಲಿಸಿ ಅಟ್ಟಿದರು. ರೋಮನರ ಸೈನ್ಯ ರೈನ್ ನದಿಯ ಕಡೆ ಹಿಂದೆಗೆಯಬೇಕಾಯಿತು. ಈ ಯುದ್ಧ ಕಾಲದಲ್ಲಿ ಜರ್ಮನರ ಬಗೆಗಿನ ಅಪಾರ ವಿವರಗಳು ರೋಮ್ ನಗರವನ್ನು ಮುಟ್ಟಿದುವು. ಕಾರ್ನೀಲಿಯಸ್ ಟ್ಯಾಸಟಸ್ (ಕ್ರಿ.ಶ. ಸು. 55-120) ಈ ವಿಷಯಗಳನ್ನು ಸಂಗ್ರಹಿಸಿ ಕ್ರಿ. ಶ. 98ರಲ್ಲಿ ಜಮ್ರ್ಯಾನಿಯ ಎಂಬ ಗ್ರಂಥವನ್ನು ಪ್ರಕಟಿಸಿದ. ಮಾನವಕುಲಶಾಸ್ತ್ರದ ದೃಷ್ಟಿಯಿಂದ ಇದು ಅಮೂಲ್ಯ ಗ್ರಂಥ. ಇದರಲ್ಲಿರುವ ವಿಷಯಗಳಿಗೆ ಪುರಾತತ್ವ ಸಂಶೋಧನೆಗಳಿಗೆ ದೊರಕಿರುವ ಸಂಗತಿಗಳು ಪೂರಕವಾಗಿವೆ.

ಟ್ಯಾಸಟಸ್ ತಿಳಿಸುವಂತೆ, ಜರ್ಮನರ ಪ್ರಾಚೀನ ಗೀತೆಗಳ ಪ್ರಕಾರ ಮನಸ್ ಎಂಬಾತ ಟುಯಿಸ್ಟೊ ಭೂದೇವತೆಯ ಮಗ. ಮನಸ್ಸಿನ ಮೂವರು ಮಕ್ಕಳ ವಂಶಜರೇ ಜರ್ಮನರು. ಸೃಷ್ಟಿಯಲ್ಲಿ ಜರ್ಮನರ ಮನಸ್ ಹಿಂದೂ ಪುರಾಣ ಪುರುಷ ಮನುವನ್ನು ಹೋಲುತ್ತಾನೆ. ಮನಸ್ಸನ ಮೂವರು ಮಕ್ಕಳ ಸಂತತಿಯವರು ಇಂಗೆವೋನೆಸ್, ಹರ್ಮಿನೋನೆಸ್ ಮತ್ತು ಇಸ್ತವೋನೆಸ್ ಎಂಬ ಮೂರು ಮಾನವ ಸಮೂಹಗಳಾಗಿ ವಿಭಾಗಗೊಂಡರು. ಇಂಗೆವೋನೆಸ್ ಬಣ ವಾಯುವ್ಯ ಭಾಗದ ಜನರನ್ನೊಳಗೊಂಡಿದೆ ; ಮಧ್ಯ ಜರ್ಮನಿಯ ಜನ ಹರ್ಮಿನೋನೆಸ್ ಬಣಕ್ಕೆ ಸೇರಿದವರು ; ಇಸ್ತವೋನೆಸ್ ಬಣದವರು ರೈನ್ ನದಿಯ ಭಾಗದ ಜನ. ಈ ಮೂರು ಬಣಗಳ ಹೆಸರುಗಳನ್ನು ಇತಿಹಾಸಕಾರ ಹಿರಿಯ ಪ್ಲಿನೀ ತಿಳಿಸುವುದಿಲ್ಲ. ಅವರ ಬಗ್ಗೆ 6ನೆಯ ಶತಮಾನದ ಫ್ರಾಂಕ್ ಜನಾಂಗದ ದಾಖಲೆಗಳಲ್ಲಿಯೂ ವಿವರಗಳಿಲ್ಲ. ಜಮ್ರ್ಯಾನಿಕ್ ಜನಾಂಗದ ಈ ವರ್ಗೀಕರಣ ಏಕಾಯಿತು, ಯಾವ ಆಧಾರದ ಮೇಲಾಯಿತು ಎಂಬುದನ್ನು ಟ್ಯಾಸಟಸ್ ತನ್ನ ಜಮ್ರ್ಯಾನಿಯ ಗ್ರಂಥದಲ್ಲಿ ಸೂಚಿಸಿಲ್ಲ. ಆದಾಗ್ಯೂ ಈ ಚರಿತ್ರಕಾರ ವಿವಿಧ ವಂಶಾವಳಿಗಳನ್ನು ಸಂಗ್ರಹಿಸಿದ್ದಾನೆ. ಅವುಗಳ ಪ್ರಕಾರ ಮನಸ್ ಮೂಲಪುರುಷನಿಗೆ ಅನೇಕ ಗಂಡು ಮಕ್ಕಳಿದ್ದರು. ಅವರು ಸುಯಿಬಿ, ವಾಂಡಲರು ಮತ್ತು ಇತರ ಬಣಗಳ ಜನ ಪೂರ್ವಜರಾಗಿದ್ದರು. ಟ್ಯಾಸಟಸ್‍ನ ಕಾಲದಲ್ಲಿ ವಿವಿಧ ಜಮ್ರ್ಯಾನಿಕ್ ಬಣಗಳ ಜನ ತಮಗಿದ್ದ ಪರಸ್ಪರ ಸಂಬಂಧವನ್ನು ತಿಳಿದಿದ್ದರೆಂಬುದು ಆತ ಸಂಗ್ರಹಿಸಿದ ಕವನಗಳಿಂದ ವ್ಯಕ್ತವಾಗುವುದು. ರೋಮ್ ಸಾಮ್ರಾಜ್ಯ ಸೇವೆಯಲ್ಲಿದ್ದ ಜಮ್ರ್ಯಾನಿಕ್ ಜನ ತಾವು ಜರ್ಮನಿ ಜನ ಎಂದು ಹೇಳಿಕೊಳ್ಳುತ್ತಿದ್ದರೂ ರೈನ್ ನದಿಯಾಚೆ ಇದ್ದ ಮುಕ್ತ ಜರ್ಮನರಿಗೆ ಕ್ರಿ. ಶ. 11ನೆಯ ಶತಮಾನದವರೆಗೆ ಸಮೂಹ ಸೂಚಕವಾದ ಯಾವ ಹೆಸರೂ ಇರಲಿಲ್ಲ. ಜರ್ಮನಿ ಶಬ್ದಕ್ಕೆ ಮೂಲವನ್ನು ಕಂಡುಹಿಡಿಯಲು ಟ್ಯಾಸಟಸ್ ಪ್ರಯತ್ನಿಸಿದ್ದಾನೆ. ಮೂಲತಃ ಜರ್ಮನಿ ಎಂಬ ಪದ ಒಂದೇ ಜಮ್ರ್ಯಾನಿಕ್ ಬುಡಕಟ್ಟಿನ ಜನರ ಹೆಸರಾಗಿತ್ತು; ಅವರಿಗೆ ಕಾಲಕ್ರಮದಲ್ಲಿ ತುಂಗ್ರಿ ಎಂಬ ಹೆಸರಾಯಿತು-ಎಂದು ಆತ ಹೇಳುತ್ತಾನೆ. ಇತಿಹಾಸಕಾರರಿಗೆ ನಿಲುಕದ ಯಾವುದೋ ಹಿಂದಿನ ಕಾಲದಲ್ಲಿ ಈ ತುಂಗ್ರಿ ಜನ ತಮ್ಮ ಉಗಮಾವಸ್ಥೆಯಲ್ಲಿ ರೈನ್ ನದಿಯನ್ನು ದಾಟಿ ಮೆನ್ಸ್ ಕಣಿವೆಗೆ ಬಂದರು; ಅಲ್ಲಿದ್ದ ಗಾಲ್ ಜನರನ್ನು ಓಡಿಸಿದರು. ಆಗ ಅವರಿಗೆ ಜರ್ಮನಿ ಎಂಬ ಹೆಸರಿತ್ತು; ಆ ಹೆಸರು ಅವರ ದೇಶದವರಿಗೆಲ್ಲ ಅನ್ವಯವಾಯಿತು. ಇಷ್ಟಾದರೂ ಜರ್ಮನಿ ಎಂದರೇನು, ಅದು ಯಾವ ಭಾಷೆಯ ಪದ ಎಂಬುದು ಈವರೆಗೆ ಇತ್ಯರ್ಥವಾಗಿಲ್ಲ.
ಜಮ್ರ್ಯಾನಿಕ್ ಜನಾಂಗದ ಹಂಚಿಕೆ : ಟ್ಯಾಸಟಸ್ಸನ ಕಾಲದಲ್ಲಿ ಜರ್ಮನಿ ಜನ ಈ ರೀತಿ ಬಣಗಳಾಗಿ ಹಂಚಿಹೋಗಿದ್ದರು: ಅವರಲ್ಲಿ ಚಟ್ಟಿ ಬಣದವರು ಈಗಿನ ಹೆಸ್ ಎಂಬಲ್ಲಿ ವಾಸವಾಗಿದ್ದರು. ಫ್ರಿಸ್ಸಿ ಬಣದವರು ಸಮುದ್ರ ತೀರಗಳಲ್ಲಿ ನೆಲೆಸಿದ್ದರು. ಚೌಸಿ ಜನ ವೇಸರ್ ನದಿಯ ಮುಖಜಭೂಮಿಯ ಪ್ರದೇಶದಲ್ಲಿದ್ದರು. ಅವರಿಗೆ ದಕ್ಷಿಣದಲ್ಲಿ ಚೆರುಸಿ ಬಣದ ಜನರಿದ್ದರು. ಸುಯಿಬಿ ಬಣದವರು ಮೆಕ್ಲೆನ್ ಬರ್ಗ್, ಬ್ರ್ಯಾಂಡೆನ್‍ಬರ್ಗ್, ಸ್ಯಾಕ್ಸನಿ ಮತ್ತು ತ್ಯುರಿಂಜಿಯ ಪ್ರದೇಶಗಳಲ್ಲಿದ್ದ ಜನ. ಹಾವೆಲ್ ಮತ್ತು ಷ್ಪ್ರೇ ನದಿಗಳ ಜಲಾನಯನ ಭೂಮಿಯ ಪ್ರದೇಶದ ಸೆಂನೋನ್ ಜನ ಮತ್ತು ಲ್ಯಾಂಗಬಾರ್ಡಿ ಬಣದ ಜನ ಸಹ ಸುಯಿಬಿ ಬಣಕ್ಕೆ ಸೇರಿದವರೆ. ನೆರ್ತಸ್ ಸ್ತ್ರೀ ದೇವತೆಯನ್ನು ಆರಾಧಿಸುತ್ತಿದ್ದ ಏಳು ಬಣಗಳ ಪೈಕಿ ಆಂಗ್ಲಿ (ಆಂಗೆಲ್ಸ್) ಬಣ ಆಂಗ್ಲೆನ್ ಪರ್ಯಾಯದ್ವೀಪದಲ್ಲಿ ನೆಲೆಸಿತ್ತು. ರೋಮ್ ಸಾಮ್ರಾಜ್ಯದ ಡ್ಯಾನ್ಯೂಬ್ ನದಿಯ ಗಡಿಯಲ್ಲಿ ಹೆರ್‍ಮುಂಡುರಿ ಜನ ರೀಗೆನ್ಸ್ ಬರ್ಗ್ ಭಾಗದಿಂದ ತ್ಯುರಿಂಜಿಯದವರೆಗೆ ವ್ಯಾಪಿಸಿಕೊಂಡಿದ್ದರು. ಹಿಂದೆ ಮೇನ್ ಕಣಿವೆಯಲ್ಲಿ ವಾಸಿಸುತ್ತಿದ್ದ ಮಾರ್ಕೊಮನ್ನಿ ಬಣದ ಜನ ಕ್ರಿ.ಪೂ. ದ ಕೊನೆಯ ದಶಕದಲ್ಲಿ ಬೊಹೀಮಿಯಕ್ಕೆ ವಲಸೆ ಬಂದರು. ಬೊಹೀಮಿಯಕ್ಕೆ ಪೂರ್ವ ಭಾಗದಲ್ಲಿ ಮೊರೇವಿಯದ ಖ್ವಾದಿ ಜನರಿದ್ದರು. ಡ್ಯಾನ್ಯೂಬ್ ನದಿಯ ಕೆಳ ಪ್ರದೇಶದಲ್ಲಿದ್ದ ಬ್ಯಾಸ್ಟರ್ನೆ ಬಣದವರು ಸಹ ಜಮ್ರ್ಯಾನಿಕ್ ಜನಾಂಗದವರೆ ಎಂದು ತಿಳಿಯಲಾಗಿತ್ತು ; ಸ್ಯುಯೋನಿ ಮತ್ತು ಸಿಟೋನಿ ಜಮ್ರ್ಯಾನಿಕ್ ಬಣಗಳು ಸ್ವೀಡನ್ ಭಾಗದಲ್ಲಿದ್ದುವೆಂದು ಟ್ಯಾಸಟಸ್ ತಿಳಿಸುತ್ತಾನೆ. ಐತಿಹಾಸಿಕ ದೃಷ್ಟಿಯಲ್ಲಿ ಅಷ್ಟು ಪ್ರಮುಖವಲ್ಲದ ಬಣಗಳ ವಿವರಣೆಗಳನ್ನು ನೀಡಿದರೂ ಆತ ಸ್ಯಾಕ್ಸನ್ ಮತ್ತು ಬರ್ಗಂಡಿ ಜನರ ಬಗ್ಗೆ ಯಾವ ವಿವರಗಳನ್ನೂ ಕೊಟ್ಟಿಲ್ಲ.

ಕ್ರಿ.ಶ. 3ನೆಯ ಶತಮಾನದ ಹೊತ್ತಿಗೆ ಜಮ್ರ್ಯಾನಿಕ್ ಜನಾಂಗದವರಲ್ಲಿ ಮುಖ್ಯ ಬದಲಾವಣೆಗಳು ತಲೆದೋರಿದವು. ಈ ಹೊತ್ತಿಗೆ ಟ್ಯಾಸಟಸನಿಗೆ ತಿಳಿಯದೆ ಹೋಗಿದ್ದ ಮೂರು ಬಲಯುತವಾದ ಬಣಗಳು ರೈನ್ ನದಿಯ ಪೂರ್ವ ಭಾಗದಲ್ಲಿದ್ದವು. ಈ ಬಣಗಳ ಪೈಕಿ ಫ್ರ್ಯಾಂಕ್ ಬಣದ ಜನ ರೈನ್ ನದಿಯ ಕೆಳಭಾಗದ ರೋಮನ್ ಗಡಿಯ ಬಳಿ ನೆಲೆಯಾಗಿದ್ದರು ; ಕ್ರಿ.ಶ. ಸು. 260ರಿಂದ ಮೇನ್ ಕಣಿವೆಯ ಭಾಗವನ್ನು ಬರ್ಗಂಡಿ ಜನ ಆಕ್ರಮಿಸಿಕೊಂಡಿದ್ದರು ; ಅಲಮನ್ನಿ ಬಣದವರು ಅಗ್ರಿ ಡೆಕುಮಾಟೆಸ್ ಪ್ರದೇಶದ ಒಡೆಯರಾಗಿದ್ದರು. ಟ್ಯಾಸಟಸ್ ಬಾಲ್ಟಿಕ್ ತೀರದವರೆಂದು ಹೇಳಿರುವ ಜನ 2ನೆಯ ಶತಮಾನದ ಹೊತ್ತಿಗೆ ದಕ್ಷಿಣದ ಕಡೆ ಹೊರಟುಹೋಗಿದ್ದರು. ಆಗ ಗಾತ್ ಜನ ಉಕ್ರೇನ್ ಮತ್ತು ಈಗಿನ ಆಧುನಿಕ ರೂಮೇನಿಯ ಭಾಗಗಳ ಮೇಲೆ ನಿಯಂತ್ರಣ ಹೊಂದಿದ್ದರು. ಗೆಪಿಡೆ ಬಣದ ಜನ ಟ್ರಾನ್ಸಿಲ್‍ವೇನಿಯಕ್ಕೆ ಉತ್ತರದ ಪರ್ವತಭಾಗಗಳಲ್ಲಿದ್ದರು. ಅವರ ಪಶ್ಚಿಮದ ನೆರೆಯವರು ವಾಂಡಲರು.

ಕ್ರಿ. ಶ. 500ರ ಹೊತ್ತಿಗೆ ಜರ್ಮನಿ ಬಣಗಳಲ್ಲಿ ಮತ್ತಷ್ಟು ಬದಲಾವಣೆಗಳಾಗಿದ್ದುವು. ಆಂಗ್ಲೆಸ್ ಮತ್ತು ಸ್ಯಾಕ್ಸನ್ ಜನ ಇಂಗ್ಲೆಂಡಿಗೆ ಕಾಲಿಟ್ಟಿದ್ದರು. ಸಾಕ್ಸನರಲ್ಲಿ ಹಳೆಯ ಸ್ಯಾಕ್ಸನರೆಂಬ ಜನ ಜರ್ಮನಿಯಲ್ಲೇ ಉಳಿದರು. ಫ್ರ್ಯಾಂಕ್ ಜನ ಈಶಾನ್ಯ ಗಾಲ್ ಭಾಗದ ಒಡೆಯರಾಗಿದ್ದರು. ಬರ್ಗಂಡಿ ಜನ ರೋನ್ ಕಣಿವೆಯಲ್ಲಿದ್ದರು. ಅವರ ಪಶ್ಚಿಮದ ನೆರೆಯಲ್ಲಿ ವಿಸಿಗಾತ್ ಬಣದ ಜನರಿದ್ದರು. ಇಟಲಿಯಲ್ಲಿ ಆಸ್ಟ್ರೋಗಾತರು ಮತ್ತು ಆಫ್ರಿಕದಲ್ಲಿ ವಾಂಡಲರು ನೆಲೆಸಿದ್ದರು. ಗಾಲ್ ದೇಶದಲ್ಲಿದ್ದ ವಿಸಿಗಾತರನ್ನು ಫ್ರ್ಯಾಂಕ್ ಜನ ಕ್ರಿ. ಶ. 507ರಲ್ಲಿ ಓಡಿಸಿ ಅವರ ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಆ ತರುವಾಯ ವಿಸಿಗಾತರು ಸ್ಪೇನ್ ದೇಶದಲ್ಲಿ ವಾಸವಾಗಿದ್ದು ಕೊನೆಗೆ 711ರಲ್ಲಿ ಮಹಮದೀಯರಿಂದ ನಾಶಗೊಂಡರು. ಲಾಂಬಾರ್ಡೀ ಜನ 568ರಲ್ಲಿ ಇಟಲಿ ದೇಶವನ್ನು ಹೊಕ್ಕು ಅಲ್ಲಿ ಸ್ವತಂತ್ರ ರಾಜ್ಯವನ್ನು ಕಟ್ಟಿಕೊಂಡು ಕೊನೆಗೆ ಫ್ರ್ಯಾಂಕರ ದೊರೆ ಷಾರ್ಲಮೇನ್‍ನಿಂದ ವಿನಾಶಗೊಂಡರು. ಗಾತ್ ಮತ್ತು ಇತರ ಬಣಗಳು ಬಿಟ್ಟುಹೋದ ಪೂರ್ವ ಜರ್ಮನಿಯನ್ನು ಸ್ಲಾವ್ ಜನ ವಶಪಡಿಸಿಕೊಂಡು ಪಶ್ಚಿಮಕ್ಕೆ ಬೊಹೀಮಿಯ ಮತ್ತು ಎಲ್ಬ್ ನದಿಯವರೆಗೆ ಹರಡಿದ್ದರು. 8ನೆಯ ಶತಮಾನದ ತರುವಾಯ ಜರ್ಮನರು ಪೂರ್ವ ಜರ್ಮನಿ, ಆಸ್ಟ್ರಿಯದ ದಕ್ಷಿಣ ಭಾಗ, ಸ್ಟೀರಿಯ ಮತ್ತು ಕರಿಂತೀಯಗಳನ್ನು ಸ್ಲಾವರಿಂದ ಗೆದ್ದುಕೊಂಡರು.

ನಾಗರಿಕತೆ : ಜರ್ಮನಿ ಜನಾಂಗದ ಪ್ರಾಚೀನ ನಾಗರಿಕತೆ ಮತ್ತು ಸಂಸ್ಕøತಿಗಳ ಬಗ್ಗೆ ಜೂಲಿಯಸ್ ಸೀಜûರನ ಮತ್ತು ಟ್ಯಾಸಟಸ್ಸನ ದಾಖಲೆಗಳೇ ಮುಖ್ಯ ಆಧಾರ. ಸೀಜûರ್ ತಿಳಿಸುವಂತೆ ಜರ್ಮನರು ಪ್ರಾರಂಭದಲ್ಲಿ ವ್ಯವಸಾಯಗಾರರಾಗಿರಲಿಲ್ಲ. ಪಶು ಸಂಗೋಪನೆಯೇ ಅವರ ಕಸುಬು. ಹಾಲು, ಬೆಣ್ಣೆ, ಮಾಂಸ ಅವರ ಮುಖ್ಯ ಆಹಾರ. ಕ್ರಿ. ಪೂ. 1ನೆಯ ಶತಮಾನದವರೆಗೆ ಅವರಲ್ಲಿ ಭೂಮಿ ಖಾಸಗಿ ಆಸ್ತಿಯ ರೂಪದಲ್ಲಿರಲಿಲ್ಲ. ಅದು ಇಡೀ ಸಮುದಾಯದ ಆಸ್ತಿಯಾಗಿತ್ತು. ಸೀಜûರ್ ರೈನ್ ನದಿಯ ಪ್ರದೇಶಕ್ಕೆ ಬಂದುಹೋದ 100 ವರ್ಷಗಳ ತರುವಾಯದ ಭೂ ಹಿಡುವಳಿ ಪದ್ಧತಿಯನ್ನು ಟ್ಯಾಸಟಸ್ ವಿವರಿಸುತ್ತಾನೆ. ಅವನ ಹೇಳಿಕೆಯ ಪ್ರಕಾರ, ರೈತರ ಸಂಖ್ಯೆಗೆ ಅನುಗುಣವಾದ ಭೂಮಿಯನ್ನು ಇಡೀ ಬಣ ಒಟ್ಟಿಗೆ ಹೊಂದಿತ್ತು ; ಅವರವರ ಸಾಮಾಜಿಕ ಅಂತಸ್ತಿಗೆ ತಕ್ಕಂತೆ ಭೂಮಿ ಸಾಗುವಳಿಗೆ ಹಂಚಿಕೆಯಾಗುತ್ತಿತ್ತು. ಭೂಮಿ ಹೇರಳವಾಗಿದ್ದ ಕಾರಣ ವಿಭಜನೆ ಸುಲಭವಾಗಿತ್ತು. ಒಂದು ವರ್ಷ ಬೇಸಾಯ ಮಾಡಿದ ಭೂಮಿಯನ್ನು ಉಳುತ್ತಿದ್ದರು. ಕಾಲಕ್ರಮದಲ್ಲಿ ಭೂಮಿಯನ್ನು ಸ್ವಂತ ಆಸ್ತಿಯನ್ನಾಗಿಟ್ಟುಕೊಳ್ಳುವ ಪದ್ಧತಿ ಜರ್ಮನಿಯಲ್ಲಿ ಆಚರಣೆಗೆ ಬಂತು. ಪ್ರಾಚೀನ ಜರ್ಮನರು ಧಾನ್ಯಗಳನ್ನು ಮಾತ್ರವಲ್ಲದೆ ತರಕಾರಿ ಮತ್ತು ಗೆಡ್ಡೆಗಳನ್ನು ಬೆಳೆಯುತ್ತಿದ್ದರು. ರೋಮನರ ಸಂಪರ್ಕವಿದ್ದ ಕಾಲದಲ್ಲಿ ಸೇಬು ಕೃಷಿ ಹೆಚ್ಚಾಗಿತ್ತು. ವ್ಯವಸಾಯ ಪದ್ಧತಿ ಹೇಗಿದ್ದಿತೆಂಬುದನ್ನು ಸೀಜûರನಾಗಲಿ ಟ್ಯಾಸಟಸ್ ಆಗಲಿ ತಿಳಿಸುವುದಿಲ್ಲ. ಬೊಹುಸ್ಲನ್ ಬಳಿಯ ಕಂಚಿನ ಯುಗದ ಬಂಡೆಯ ಕೆತ್ತನೆಗಳಲ್ಲಿ ಎತ್ತುಗಳು ಎಳೆಯುವ ನೇಗಿಲ ಚಿತ್ರವಿದೆ. ಜಮ್ರ್ಯಾನಿಕ್ ಜನಾಂಗಕ್ಕೆ ಜಾನುವಾರುಗಳೇ ಮುಖ್ಯ ಆಸ್ತಿ. ವ್ಯಕ್ತಿಯ ಸ್ಥಾನಮಾನ ವ್ಯಕ್ತಿ ಹೊಂದಿದ್ದ ದನಕರುಗಳನ್ನು ಅವಲಂಬಿಸಿತ್ತು. ರೋಮನರ ದೃಷ್ಟಿಯಲ್ಲಿ ಜರ್ಮನರ ರಾಸುಗಳು ಮತ್ತು ಅಶ್ವಗಳು ಸಾಮಾನ್ಯ ದರ್ಜೆಯವು. ಸೀಜûರನ ಕಾಲಕ್ಕೆ ನಾಲ್ಕು ಶತಮಾನಗಳ ಹಿಂದೆ ಪಾತ್ರೆಗಳು, ಅಗತ್ಯ ಬಳಕೆ ವಸ್ತುಗಳು ಮತ್ತು ಸಮರಾಸ್ತ್ರಗಳನ್ನು ತಯಾರಿಸಿಕೊಳ್ಳುವಷ್ಟು ಲೋಹ ಸಿಗುತ್ತಿರಲಿಲ್ಲ. ತರುವಾಯ ಕಂಚಿನ ವಸ್ತುಗಳ ತಯಾರಿಕೆಯಲ್ಲಿ ಜರ್ಮನರು ಪ್ರಸಿದ್ಧರಾದರು. ಪ್ರಾರಂಭ ಕಾಲದಲ್ಲಿ ಮಡಕೆಗಳನ್ನು ಕೈಯಿಂದ ಇಲ್ಲವೆ ಕಂಬಾರ ಚಕ್ರದಿಂದ ತಯಾರಿಸುತ್ತಿದ್ದರು.
ಕ್ರಿ. ಶ. ಸುಮಾರು 3ನೆಯ ಕುಂಬಾರ ಶತಮಾನದಲ್ಲಿ ರೂನ್ ವರ್ಣಮಾಲೆಯ ಮೇಲೆ ಆಧಾರಿತವಾದ ಲಿಖಿತಭಾಷೆ ಜರ್ಮನಿಯಲ್ಲಿ ಪ್ರಚಲಿತವಾಗಿತ್ತು. ಈ ವರ್ಣಮಾಲೆ ಗ್ರೀಕ್ ಮತ್ತು ರೋಮನ್ ಲಿಪಿಗಳಿಂದ ರೂಪಿತವಾದದ್ದು.

	ಕ್ರಿ. ಪೂ. 1ನೆಯ ಶತಮಾನದಲ್ಲಿ ಗುಲಾಮರ ವ್ಯಾಪಾರ ಜರ್ಮನಿಯಲ್ಲಿ ನಡೆಯುತ್ತಿತ್ತು. ಗುಲಾಮರನ್ನು ಕೊಂಡು ರೋಮನರು ರೋಮ್ ನಗರಕ್ಕೆ ಸಾಗಿಸುತ್ತಿದ್ದರು. ಇಟಲಿಯವರು ಮತ್ತು ಕೆಲ್ಟಿಕ್ ಜನ ತಯಾರಿಸಿದ ಸಾಮಾನುಗಳು ಜರ್ಮನಿಯಲ್ಲಿ ವ್ಯಾಪಾರವಾಗುತ್ತಿದ್ದವು. ವಿದೇಶಿ ವ್ಯಾಪಾರಿಗಳಿಂದ ಶ್ರೀಮಂತಯೋಧರು ಉತ್ತಮ ಮದ್ಯ, ಕಂಚಿನ ಪಾತ್ರೆಗಳು ಮೊದಲಾದುವನ್ನು ಕೊಳ್ಳುತ್ತಿದ್ದರು. ಆಗಸ್ಟಸ್ ಸಾಮ್ರಾಟನ ಕಾಲದಿಂದ ರೋಮ್ ನಗರದ ಸರಕುಗಳು ಜರ್ಮನಿಗೆ ಹೇರಳವಾಗಿ ಬರತೊಡಗಿದವು. ಆಗ ಜರ್ಮನಿಯ ಶ್ರೀಮಂತರು ಗಾಜಿನ ಪಾತ್ರೆ, ಊಟದ ಪಾತ್ರೆ, ಹಾಗೂ ತಟ್ಟೆಗಳು, ರೋಮ್ ದೇಶದ ಆಯುಧಗಳು, ಆಭರಣಗಳು, ಪ್ರತಿಮೆಗಳು ಮೊದಲಾದ ವಸ್ತುಗಳನ್ನು ಬಹು ಮೆಚ್ಚಿನವೆಂದು ಕೊಳ್ಳುತ್ತಿದ್ದರು. ಕ್ರಿ. ಪೂ. 1ನೆಯ ಶತಮಾನದ ಉತ್ತರಾರ್ಧದಲ್ಲಿ ಆಂಬರ್ ವ್ಯಾಪಾರ ಮುಖ್ಯವಾಗಿತ್ತು.
ಆಡಳಿತವ್ಯವಸ್ಥೆ : ಸೀಜರ್ ವರ್ಣಿಸುವ ಜರ್ಮನಿಯಲ್ಲಿ ನಿರಂಕುಶ ಪ್ರಭುತ್ವ ಕಂಡುಬರುವುದಿಲ್ಲ. ಪ್ರತಿಯೊಂದು ಬಣವೂ ಆಂತರಿಕ ವಿವಾದಗಳನ್ನು ತಾನೇ ತೀರ್ಮಾನಿಸುತ್ತಿತ್ತು. ಬಣಗಳ ನಡುವಣ ವಿವಾದಗಳನ್ನು ಇತ್ಯರ್ಥ ಮಾಡಲು ಆಗ ಯಾವ ಮಧ್ಯಸ್ಥಿಕೆ ವ್ಯವಸ್ಥೆಯಾಗಲೀ ಕೇಂದ್ರೀಯ ನಿಯಂತ್ರಣವಾಗಲೀ ಇರಲಿಲ್ಲ. ಹೀಗೆ ಬಣಗಳು ಸ್ವತಂತ್ರವಾಗಿಯೇ ಒಳಾಡಳಿತ ನಡೆಸುತ್ತಿದ್ದವು. ಯುದ್ಧಕಾಲದಲ್ಲಿ ಜರ್ಮನರು ಏರ್ಪಡಿಸಿಕೊಳ್ಳುತ್ತಿದ್ದ ಒಕ್ಕೂಟಕ್ಕೆ ಬಣಗಳು ನಾಯಕರನ್ನು ಚುನಾಯಿಸುತ್ತಿದ್ದುವು. ಅವರಲ್ಲಿ ಯಾರಿಗೂ ಮತ್ತೊಬ್ಬರಿಗಿಂತ ಹೆಚ್ಚಿನ ಅಧಿಕಾರವಿರಲಿಲ್ಲ; ಸಮಾನಾಧಿಕಾರ ಹೊಂದಿ ಯುದ್ಧದಲ್ಲಿ ಎಲ್ಲರೂ ಸಹಕರಿಸುತ್ತಿದ್ದರು. ಕ್ರಿ. ಶ. 4ನೆಯ ಶತಮಾನದಲ್ಲಿ ಸಹ ಇದೇ ಪರಿಸ್ಥಿತಿ ಇತ್ತು. ಶಾಂತಿ ಕಾಲದಲ್ಲಿ ಜರ್ಮನಿ ಬಣಗಳಿಗೆ ಅರಸನಿರುತ್ತಿರಲಿಲ್ಲ.

	ಟ್ಯಾಸಟಸನ ಕಾಲದಲ್ಲಿ ಹೊಸ ಮಾದರಿಯ ಸೈನಿಕ ನಾಯಕತ್ವ ಜರ್ಮನಿಯಲ್ಲಿತ್ತು. ಬಣಕ್ಕೆ ನಾಯಕ ಆಗ ಚುನಾಯಿತನಾಗುತ್ತಿದ್ದ. ಆದರೆ ಎಲ್ಲ ಯೋಧರೂ ಚುನಾವಣೆಗೆ ನಿಲ್ಲಲ್ಲು ಅರ್ಹರಾಗಿರಲಿಲ್ಲ. ಒಮ್ಮತ್ತದಿಂದ ಅಂಗೀಕೃತವಾದ ಅರಸುಕುಲಕ್ಕೆ ನಾಯಕನ ಅಧಿಕಾರವನ್ನು ವಹಿಸಲಾಗುತ್ತಿತ್ತು. ಈ ಪದ್ಧತಿ 1ನೆಯ ಶತಮಾನದಲ್ಲಿ ಚೆರುಸಿ ಮತ್ತು ಬಟೇವಿಯ ಬಣಗಳಲ್ಲಿ ಮತ್ತು 6ನೆಯ ಶತಮಾನದಲ್ಲಿ ಹೆರೂಲಿ ಬಣದಲ್ಲಿ ಕಂಡುಬರುತ್ತದೆ. ನಾಯಕತ್ವ ಅನುವಂಶಿಕವಲ್ಲ. 1ನೆಯ ಶತಮಾನದಲ್ಲಿ ಬಣದ ನಾಯಕನ ಮರಣಾನಂತರ ಅವನ ಮಗ ನಾಯಕನಾಗಿ ಬಂದ ನಿದರ್ಶನಗಳಿಲ್ಲ. ಬಣನಾಯಕ ಧಾರ್ಮಿಕ ಹಾಗೂ ಸೈನಿಕ ಕರ್ತವ್ಯಗಳನ್ನು ವಹಿಸುತ್ತಿದ್ದ; ನಿರಂಕುಶ ಪ್ರಭುವಾಗಿರಲಿಲ್ಲ. ಬಣದ ಪ್ರಮುಖರು ಸದಸ್ಯರಾಗಿದ್ದ ಪರಿಷತ್ತು ಅವನನ್ನು ನಿಯಂತ್ರಿಸಬಹುದಾಗಿತ್ತು. ನಾಯಕ ಮಂಡಿಸಿದ ಸಲಹೆಗಳನ್ನು ಯೋಧರ ಸಾರ್ವತ್ರಿಕ ಸಭೆ ನಿರಾಕರಿಸಬಹುದಾಗಿತ್ತು ; ರಣರಂಗದಲ್ಲಿ ತನ್ನ ಆಜ್ಞೆಗಳನ್ನು ಪಾಲಿಸುವಂತೆ ಯೋಧರನ್ನು ಒತ್ತಾಯಪಡಿಸುವ ಅಧಿಕಾರವನ್ನು ಸಹ ಆತ ಹೊಂದಿರಲಿಲ್ಲ. ಅವನ ಸ್ವಂತ ಗುಣಗಳ ಮೇಲೆ ಅವನ ವ್ಯಕ್ತಿತ್ವ ಮತ್ತು ಪ್ರಭಾವ ನಿರ್ಧಾರವಾಗುತ್ತಿತ್ತು. ಸೀಜûರ್ ವರ್ಣಿಸುವ ಜರ್ಮನಿಯ ಬಣಗಳಲ್ಲಿ ಇಬ್ಬರು ನಾಯಕರು ನೇಮಕವಾಗುತ್ತಿದ್ದರು. ಆದರೆ ಸೀಜûರನ ತರುವಾಯ ಬಂದ ಟ್ಯಾಸಟಸನ ಕಾಲಕ್ಕೆ ಬಣಕ್ಕೆ ಒಬ್ಬನೇ ನಾಯಕನಿರುತ್ತಿದ್ದನೆಂದು ತಿಳಿದುಬರುತ್ತದೆ.

	ಬಣದ ಪ್ರಮುಖರ ಪರಿಷತ್ತು (ಪ್ರಿನ್ಸೆಪ್ಸ್) ಸಣ್ಣಪುಟ್ಟ ವ್ಯವಹಾರಗಳನ್ನೂ ಯೋಧರ ಸಾರ್ವತ್ರಿಕ ಸಭೆ ಜನತೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳನ್ನೂ ನಿರ್ಣಯಿಸುತ್ತಿದ್ದುವು. ಆ ವಿಷಯಗಳು ಪರಿಷತ್ತಿನ ಗಮನಕ್ಕೆ ಬಾರದೆ ಹೋಗುತ್ತಿರಲಿಲ್ಲ. ಎಲ್ಲ ಯೋಧರಿಗೂ ಸಾರ್ವತ್ರಿಕ ಸಭೆಯಲ್ಲಿ ಭಾಗವಹಿಸುವ ಹಕ್ಕಿತ್ತು ; ಆದರೆ ರಣರಂಗದಲ್ಲಿ ಹಿಮ್ಮೆಟ್ಟಿದ ಯೋಧರಿಗೆ ಈ ಅವಕಾಶವಿರಲಿಲ್ಲ. ಯೋಧರ ಸಭೆಯ ತೀರ್ಮಾನಗಳೇ ಅಂತಿಮ. ದ್ರೋಹ, ಹೇಡಿತನ, ಅತ್ಯಾಚಾರ ಮೊದಲಾದ ಅಪರಾಧಗಳಿಗೆ ಈ ಸಭೆ ಮರಣದಂಡನೆ ವಿಧಿಸುತ್ತಿತ್ತು.

	ಟ್ಯಾಸಟಸನ ಕಾಲದಲ್ಲಿ ಯೋಧರ ಸಾರ್ವತ್ರಿಕ ಸಭೆ ಬಣದ ಹಲವು ಪ್ರಮುಖರನ್ನು ನ್ಯಾಯಾಧೀಶರನ್ನಾಗಿ ಚುನಾಯಿಸುತ್ತಿತ್ತು. ಈ ನ್ಯಾಯಾಧೀಶರು ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಜನರ ಖಾಸಗಿ ವ್ಯಾಜ್ಯಗಳನ್ನು ತೀರ್ಮಾನಿಸುತ್ತಿದ್ದರು. ಪ್ರತಿ ನ್ಯಾಯಾಧೀಶನೂ ತನ್ನ ತೀರ್ಮಾನಗಳನ್ನು ಜಾರಿಗೆ ತರಲು 100 ಮಂದಿ ಪರಿವಾರದೊಡನೆ ಹೋಗುತ್ತಿದ್ದ. ಶಿಕ್ಷೆಗೆ ಗುರಿಯಾದವರು ಅಪರಾಧದ ತೀವ್ರತೆಗನುಸಾರವಾಗಿ ಕುದುರೆಗಳನ್ನು ಅಥವಾ ದನಗಳನ್ನು ದಂಡವಾಗಿ ತೆರಬೇಕಾಗಿತ್ತು. ಖೂನಿ, ಕಳ್ಳತನ ಮೊದಲಾದ ಅಪರಾಧಗಳ ಬಗ್ಗೆ ಸಂಬಂಧಪಟ್ಟ ಪಕ್ಷಗಳೇ ಕ್ರಮಕೈಗೊಳ್ಳುತ್ತಿದ್ದವು. ರಕ್ತಪಾತದಿಂದ ಕೂಡಿದ ಕುಲದ ವ್ಯಾಜ್ಯಗಳು ಪೀಳಿಗೆಯಿಂದ ಪೀಳೆಗೆಗೆ ಸಾಗಿಹೋಗುತ್ತಿದ್ದುದುಂಟು. ಕ್ರೈಸ್ತಧರ್ಮ ಪ್ರಚಾರವಾದ ಮೇಲೂ ಇಂಥ ರಕ್ತಪಾತದ ಕುಲವ್ಯಾಜ್ಯಗಳನ್ನು ಕೊನೆಗಾಣಿಸುವುದು ಜರ್ಮನಿ ಅರಸರಿಗೆ ಸುಲಭವಾದ ಕೆಲಸವೇನಾಗಲಿಲ್ಲ.

	ಸೀಜûರನ ಕಾಲದಿಂದ ಟ್ಯಾಸಟಸ್‍ನ ಕಾಲದವರೆಗೆ ಜರ್ಮನ್ ಸಮಾಜ ಹೇಗೆ ಅಭಿವೃದ್ಧಿ ಹೊಂದಿತೆಂದು ಹೇಳಲು ಸಾಧ್ಯ: ಸೀಜರನ ಕಾಲದಲ್ಲಿದ್ದುದಕ್ಕಿಂತ ಜರ್ಮನ್ ಜನ ಕ್ರಿ.ಪೂ. 1ನೆಯ ಶತಮಾನದಲ್ಲಿ ಅಷ್ಟು ಅನಾಗರಿಕರಾಗಿರಲಿಲ್ಲ. ರಾಜ್ಯಾಡಳಿತ ರೂಪರೇಷೆಗಳು ಆಗತಾನೆ ರೂಪುಗೊಳ್ಳುತ್ತಿದ್ದವು. ಅಧಿಕಾರ ಅರಸನಲ್ಲಿ ನೆಲೆಸಬೇಕೆಂಬ ಸೂತ್ರಕ್ಕೆ ಮನ್ನಣೆ ಸಿಗಲಾರಂಭವಾಗಿತ್ತು. ಖಾಸಗಿ ಜನರಲ್ಲಿ ಸಂಪತ್ತು ಶೇಖರಣೆಯಾಗಿತ್ತು. ಪರಿವಾರ ಪದ್ಧತಿ ಜರ್ಮನಿಯಲ್ಲಿ ರೂಢಿಯಲ್ಲಿದ್ದುದನ್ನು ಸೀಜûರ್ ಕಂಡಿದ್ದಾನೆ. ಈ ಪದ್ಧತಿಯ ಪ್ರಕಾರ ಸಾಹಸಿ ಯೋಧ ತನ್ನ ಪರಿವಾರದೊಂದಿಗೆ ಶತ್ರುಗಳ ಮೇಲೆ ದಾಳಿ ನಡೆಸುವ ತನ್ನ ಉದ್ದೇಶವನ್ನು ಸಾರ್ವತ್ರಿಕ ಸಭೆಯಲ್ಲಿ ಘೋಷಿಸುತ್ತಿದ್ದ. ಅವನ ಪರಿವಾರಕ್ಕೆ ಸೇರಲು ಒಪ್ಪಿದವರು ಅವನ ತಂಡವನ್ನು ಬಿಡಲಾಗುತ್ತಿರಲಿಲ್ಲ. ದಾಳಿ ಮತ್ತು ಯುದ್ಧ ಕಾಲಗಳಲ್ಲಿ ಪರಿವಾರದ ಮುಖಂಡನ ಮತ್ತು ಅವನ ಅನುಯಾಯಿಗಳ ಸಂಬಂಧ ಹಂಗಾಮಿಯಾಗಿರುತ್ತಿತ್ತು. ಯೋಧರು ಆರ್ಥಿಕ ಪ್ರತಿಫಲಕ್ಕಾಗಿ ಮುಖಂಡರನ್ನು ಅನುಸರಿಸಿಹೋಗುತ್ತಿರಲಿಲ್ಲ. ಟ್ಯಾಸಟಸ್‍ನ ಕಾಲದಲ್ಲಿ ಪರಿವಾರದ ನಾಯಕನ ಮತ್ತು ಅವನ ಯೋಧರ ಸಂಬಂಧ ಶಾಶ್ವತ ರೂಪದ್ದಾಗಿತ್ತು. ಮುಖಂಡ ಯೋಧರನ್ನು ತನ್ನ ಸೇವೆಯಲ್ಲಿರಿಸಿಕೊಂಡು ಅವರ ಪೋಷಣೆಯ ಹೊಣೆಯನ್ನು ಹೊತ್ತಿದ್ದ; ಅವರಿಗೆ ಸಮರಾಯುಧಗಳನ್ನು ಮತ್ತು ಕುದುರೆಗಳನ್ನು ಒದಗಿಸುವುದಲ್ಲದೆ ಸೂರೆಗೊಂಡ ವಸ್ತುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದ. ಆಗ ಯೋಧರಿಗೆ ಭೂಮಿಯನ್ನು ಹಂಚಿಕೊಡುವ ಊಳಿಗಮಾನ್ಯ ಪದ್ಧತಿ ಇರಲಿಲ್ಲ ; ಖಾಸಗಿ ಭೂಮಾಲೀಕತ್ವವೂ ಇರಲಿಲ್ಲ. ಮುಖಂಡ ಸತ್ತಮೇಲೆ ಬದುಕಿರುವುದು ಅಪಮಾನಕರವೆಂದು ಯೋಧರು ಭಾವಿಸಿದ್ದರು.

	ಟ್ಯಾಸಟಸನ ಕಾಲದ ಹೊತ್ತಿಗೆ ಜರ್ಮನಿಯಲ್ಲಿ ಪ್ರಜಾಪ್ರಭುತ್ವ ಪದ್ಧತಿ ಹೋಗಿ ವಿವಿಧ ಬಣಗಳಲ್ಲಿ ರಾಜ್ಯಾಧಿಕರ ಸ್ಥಾಪಿತವಾಯಿತು. ಕ್ರಿ.ಶ. 100ಕ್ಕೆ ಹಿಂದೆ ಮರೊ ಬಾಡಸ್ ಎಂಬೊಬ್ಬ ಜರ್ಮನಿ ಬಣನಾಯಕ ಮಾತ್ರವೇ ನಿರಂಕುಶ ಪ್ರಭುವಾಗಿದ್ದು ತನ್ನ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸಿದ. ಈತ ಮಾರ್ಕಮನ್ನಿ ಜನಾಂಗವನ್ನು ಕ್ರಿ.ಪೂ. ಸು. 98ರಲ್ಲಿ ಬೊಹೀಮಿಯ ಪ್ರದೇಶಕ್ಕೆ ತಂದು ನೆಲೆನಿಲ್ಲಿಸಿದ. ಅದಕ್ಕೆ ಹಿಂದೆ ಈ ಜನಾಂಗದವರು ಅವರ ಜನ್ಮಭೂಮಿಯಾದ ಮೇನ್ ಕಣಿವೆಯಲ್ಲಿದ್ದರು. ಅವನು ಎಲ್ಬ್ ಮತ್ತು ಮಿಸ್ಟಲ ನದಿಗಳ ನಡುವಣ ಜರ್ಮನರನ್ನು ತನ್ನ ಅಧೀನ ಮಾಡಿಕೊಂಡ. ಅವರಲ್ಲಿ ಸಮ್ನೊನೆಸ್, ಲಾಂಬಾರ್ಡರು, ಮತ್ತು ಲುಗಿ ಬಣದ ಜನ ಸೇರಿದ್ದರು. ಚೆರುಸಿ ಬಣದವರು ಅರಸರ ಕೆಲವು ಪ್ರಜೆಗಳೊಂದಿಗೆ ಸೇರಿಕೊಂಡು ಕ್ರಿ. ಶ. 17ರಲ್ಲಿ ಅವನನ್ನು ಪದಚ್ಯುತಿಗೊಳಿಸಿ ರೋಮ್ ಸಾಮ್ರಾಜ್ಯಕ್ಕೆ ಅಟ್ಟಿದರು.

	ಟ್ಯಾಸಟಸ್‍ನ ಕಾಲದಲ್ಲಿ ಪಶ್ಚಿಮ ಜರ್ಮನಿಯಲ್ಲಿ ಪ್ರಸಿದ್ಧವಾಗಿದ್ದ ಅನೇಕ ಜರ್ಮನ್ ಬಣಗಳು ಕ್ರಿ. ಶ. 2ನೆಯ ಶತಮಾನದಲ್ಲಿ ಕಾಣದಂತಾಗಿದ್ದವು. ಅವುಗಳ ಬದಲಿಗೆ ಅಲ್ಲಿ ನಾವು ಕಾಣುವುದು ಫ್ರ್ಯಾಂಕ್, ಬರ್ಗಂಡಿ, ಆಲಮನಿ ಮೊದಲಾದ ಬಣಗಳನ್ನು. 3ನೆಯ ಹಾಗೂ ಅನಂತರದ ಶತಮಾನಗಳಲ್ಲಿ ಈ ಬಣಗಳ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಮಾಹಿತಿಗಳು ಸಾಕಷ್ಟಿಲ್ಲ. ಜರ್ಮನ್ ಬಣದಲ್ಲಿದ್ದ ಯೋಧರ ಸಾರ್ವತ್ರಿಕ ಸಭೆ ಈ ಕಾಲದಲ್ಲಿ ಕಂಡುಬರುವುದಿಲ್ಲ. 300 ವರ್ಷಗಳ ಹಿಂದೆ ಪ್ರಜೆಗಳಿಗೆ ಸ್ವಂತ ವ್ಯವಹಾರಗಳ ಬಗ್ಗೆ ಇದ್ದ ಸ್ವಾತಂತ್ರ್ಯ 4ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಇಲ್ಲದಂತಾಗಿತ್ತು. ಪ್ರಜಾತಂತ್ರ ಸಂಸ್ಥೆಗಳು ನಿರ್ಮೂಲನಗೊಂಡು ರಾಜ್ಯಗಳು ಸ್ಥಾಪಿತವಾದ ಬಗ್ಗೆ ಸಹ ಮಾಹಿತಿಗಳಿಲ್ಲ. 4ನೆಯ ಶತಮಾನದಲ್ಲಿ ಎರ್ಮನರಿಕ್ ಎಂಬಾತ ಉಕ್ರೇನ್ ಪ್ರಾಂತ್ಯದಲ್ಲಿ ಆಸ್ಟ್ರೋಗಾತ್ ಜನಾಂಗವನ್ನು ಆಳುತ್ತಿದ್ದನೆಂದು ಮಾತ್ರ ತಿಳಿದು ಬರುತ್ತದೆ. ಜರ್ಮನ್ ಬಣನಾಯಕರು ರೋಮ್ ಸಾಮ್ರಾಜ್ಯದ ಸಾಮಂತರಾಗಿ ನೆಲೆಸುವವರೆಗೆ ಜರ್ಮನಿಯಲ್ಲಿ ರಾಜಪ್ರಭುತ್ವ ಪೂರ್ಣವಾಗಿ ಸ್ಥಾಪನೆಯಾಗಲಿಲ್ಲ. ಇಟಲಿಯ ಆಸ್ಟ್ರೋಗತರ ನಾಯಕರು, ಗಾಲ್ ಮತ್ತು ಸ್ಪೇನ್ ದೇಶಗಳ ವಿಸಿಗಾತರ ನಾಯಕರು, ಆಫ್ರಿಕದ ವಾಂಡಲರ ನಾಯಕರು ಮೊದಲಾದವರೇ ಪ್ರಪ್ರಥಮವಾಗಿ ರಾಜ್ಯವಾಳತೊಡಗಿದ ಜರ್ಮನ್ ಬುಡಕಟ್ಟಿನ ಅರಸರು.

	ಯುದ್ಧಕಲೆ : ಸೀಜûರನ ದಂಡು ಜರ್ಮನಿಯನ್ನು ಪ್ರವೇಶಿಸಿದಾಗ, ಲೋಹದ ಅಭಾವದಿಂದ ಜರ್ಮನಿಯಲ್ಲಿ ಯುದ್ಧಾಸ್ತ್ರಗಳು ಮತ್ತು ಇನ್ನಿತರ ಉಪಕರಣಗಳು ಹೆಚ್ಚು ಬಳಕೆಯಲ್ಲಿರಲಿಲ್ಲ. ಅಶ್ವಯೋಧರು ಮತ್ತು ಕಾಲಾಳುಗಳು ಬೆಂಕಿಯಿಂದ ಚೂಪುಗೊಳಿಸಿದ ಇಲ್ಲವೆ ಲೋಹದ ಮೊನೆಯುಳ್ಳ ಈಟಿಯನ್ನು ಉಪಯೋಗಿಸುತ್ತಿದ್ದರು. ಖಡ್ಗದಾರಿ ಯೋಧರು ಕೆಲವೇ ಮಂದಿ. ಯೋಧರು ಧರಿಸುವ ಕಬ್ಬಿಣದ ಶಿರರಕ್ಷೆ ಮತ್ತು ಕಬ್ಬಿಣದ ಕವಚ ಆಗಿನ ಜನರಿಗೆ ತಿಳಿಯದು. ಮರದ ಗುರಾಣಿ ಮಾತ್ರ ಯೋಧನ ರಕ್ಷೆಯಾಗಿತ್ತು ; ಅದಕ್ಕೆ ಚಕ್ಕಳ ಹೊದಿಸಿ ಬಲಗೊಳಿಸುತ್ತಿದ್ದರು. ಆಯುಧಗಳ ಅಭಾವದಿಂದ ಜರ್ಮನ್ ಸೈನಿಕರು ಒಂದೇ ಏಟಿಗೆ ರೋಮನ್ ಸೈನ್ಯದ ಮೇಲೆ ಬಿದ್ದು ಆದಷ್ಟು ಜನರನ್ನು ನಾಶಮಾಡುವ ಯುದ್ಧ ವಿಧಾನವನ್ನು ಕಲಿತಿದ್ದರು. ಮರಗಳಿಂದ ಸುತ್ತುಗಟ್ಟಲ್ಪಟ್ಟ ಬಯಲಿನಲ್ಲಿ ಶತ್ರುಗಳನ್ನು ಎದುರಿಸಿ ಮರಗಳ ರಕ್ಷಣೆಯಲ್ಲಿಯೇ ಎಲ್ಲ ಕಡೆಗಳಿಂದಲೂ ನುಗ್ಗಿ ಬಂದು ಯುದ್ಧ ಮಾಡುವುದರಲ್ಲಿ ಆ ಜನ ಪಳಗಿದ್ದರು.

	ರೋಮ್ ಚಕ್ರಾಧಿಪತ್ಯದ ಉತ್ತರಾರ್ಧದಲ್ಲಿ ಸಹ ಜರ್ಮನ್ ಯೋಧರ ಆಯುಧಗಳು ಉತ್ತಮಗೊಂಡಂತೆ ಕಾಣುವುದಿಲ್ಲ. ಕ್ರಿ. ಶ. 3ನೆಯ ಶತಮಾನದಲ್ಲಿ ಅವರು ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು ; ಬಣದ ನಾಯಕರು ಮಾತ್ರ ಕುದುರೆಗಳ ಮೇಲೆ ಕುಳಿತು ಸೈನ್ಯದ ಮುಂದೆ ಬರುತ್ತಿದ್ದರು. 6ನೆಯ ಶತಮಾನದಲ್ಲಿ ಸಹ ಜರ್ಮನ್ ಯೋಧರಿಗೆ ಕಬ್ಬಿಣದ ಕವಚ ಮತ್ತು ಶಿರಸ್ತ್ರಾಣ ಅಪರೂಪವಾದ ವಸ್ತುಗಳಾಗಿದ್ದವು. ಬೆಲಿಸಾರಿಯಸ್‍ನನ್ನು ಎದುರಿಸಿ ಯುದ್ಧ ಮಾಡಿದ ಆಸ್ಟ್ರೋಗಾತರ ಸೈನ್ಯದಲ್ಲಿ ಬಿಲ್ಲಾಳುಗಳೇ ಇದ್ದರು : 6ನೆಯ ಶತಮಾನದಲ್ಲಿ ಆಫ್ರಿಕದ ವಾಂಡಲರ ದಂಡು ಸಹ ಅದೇ ರೀತಿ ಸಜ್ಜಿತವಾಗಿತ್ತು. ಈ ಜನರಲ್ಲಿ ಚರಿತ್ರಕಾರ ಟ್ಯಾಸಟಸ್‍ನ ಕಾಲಕ್ಕಿಂತ ಹೆಚ್ಚು ಅಶ್ವ ಸವಾರರಿದ್ದಂತೆ ಕಾಣುತ್ತದೆ. ಫ್ರ್ಯಾಂಕ್ ಜನರ ದಂಡಿನಲ್ಲಿ ಅಶ್ವ ಸವಾರರೇ ಹೆಚ್ಚು. ಕಾಲಾಳುಗಳು ಗಂಡುಗೊಡಲಿಗಳನ್ನು ಉಪಯೋಗಿಸುತ್ತಿದ್ದರು. 1ನೆಯ ಜಸ್ಟೀನಿಯನ್ ಚಕ್ರವರ್ತಿಯ ಶ್ರೇಷ್ಠ ಸಮರಾಯುಧಗಳನ್ನು ಹೊತ್ತ ಬಲವಾದ ಸೈನ್ಯವನ್ನು ಎದುರಿಸಲು ಜರ್ಮನಿಯ ಯಾವ ಬಣದ ಸೈನ್ಯವೂ ಯುಕ್ತ ಆಯುಧಗಳಿಂದ ಸಜ್ಜುಗೊಂಡಿರಲಿಲ್ಲ. ಅವರಿಗೆ ಮುತ್ತಿಗೆ ಹಾಕುವ ಕಲೆ ಸಹ ತಿಳಿಯದು. ಕ್ರಿಸ್ತಶಕೆಯ ಮೊದಲ ಆರು ಶತಮಾನಗಳಲ್ಲಿ ಜರ್ಮನರು ರೋಮ್ ಸಾಮ್ರಾಜ್ಯದ ನಗರಗಳನ್ನು ಯಶಸ್ವಿಯಾಗಿ ಮುತ್ತಿಗೆ ಹಾಕುವ ಬಗ್ಗೆ ದಾಖಲೆಗಳಿಲ್ಲ. ಕ್ರಿ.ಶ. 250-251ರಲ್ಲಿ ಫಿಲಪಾಪಲಸ್ ನಗರ ಜರ್ಮನರ ವಶವಾದುದು ಅಲ್ಲಿಯ ನಗರ ಪಾಲಕನ ಕೃತ್ರಿಮದಿಂದ.

ಕ್ರೈಸ್ತಮತಾವಲಂಬನೆ : 3ನೆಯ ಶತಮಾನದ ಮಧ್ಯಭಾಗದಲ್ಲಿ ವಿಸಿಗಾತರು ಸೆರೆಹಿಡಿದ ಏಷ್ಯಮೈನರ್ ಭಾಗದ ಯುದ್ಧ ಖೈದಿಗಳಿಂದ ಕ್ರೈಸ್ತಮತ ಜರ್ಮನಿಯಲ್ಲಿ ಪ್ರಚಾರಗೊಂಡಿತು. ಆದರೆ, ವಿಸಿಗಾತರು ಕ್ರಿ. ಶ. 382-395ರಲ್ಲಿ ಡ್ಯಾನ್ಯೂಬ್ ನದಿಯ ದಕ್ಷಿಣ ಭಾಗದ ಮೀಷ್ಯ ಪ್ರಾಂತ್ಯದಲ್ಲಿ ರೋಮ್ ಚಕ್ರಾಧಿಪತ್ಯದ ಪ್ರಜೆಗಳಾಗಿ ಜೀವಿಸುತ್ತಿದ್ದ ಕಾಲಕ್ಕೆ ಹಿಂದೆ ಕ್ರೈಸ್ತಮತವನ್ನು ಅವಲಂಬಿಸಿರಲಿಲ್ಲವೆಂದು ಕಾಣುತ್ತದೆ. ಪಶ್ಚಿಮ ರೋಮನ್ ಚಕ್ರಾಧಿಪತ್ಯ ಕ್ರಿ. ಶ. 476ರಲ್ಲಿ ಪತನ ಹೊಂದುವುದಕ್ಕೆ ಹಿಂದೆ ಪ್ರಮುಖ ಜರ್ಮನ್ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಲಿಲ್ಲವೆಂದು ಕಾಣುತ್ತದೆ. ಆ ಕಾಲದಲ್ಲಿ ರೋಮ್ ಪ್ರಾಂತ್ಯಗಳಲ್ಲಿ ನೆಲೆಸಿದ ಜರ್ಮನ್ ಜನ ಒಂದು ಪೀಳಿಗೆಯೊಳಗೆ ಕ್ರೈಸ್ತಮತವನ್ನವಲಂಬಿಸಿದರು. ವಾಂಡಲರು 409-429ರಲ್ಲಿ ಸ್ಪೇನ್ ದೇಶದಲ್ಲಿದ್ದಾಗ, ಬರ್ಗಂಡಿ ಬಣ 412-439ರಲ್ಲಿ ಪೂರ್ವ ಗಾಲ್ ಪ್ರಾಂತ್ಯದಲ್ಲಿದ್ದಾಗ, ಆಸ್ಟ್ರೋಗತರು 456-472ರಲ್ಲಿ ಪನೋನೀಯ ಪ್ರಾಂತ್ಯದಲ್ಲಿದ್ದಾಗ ಕ್ರೈಸ್ತಧರ್ಮವನ್ನು ಸ್ವೀಕರಿಸಿದರು. ರೂಗಿ ಬಣದವರು 482ಕ್ಕೆ ಹಿಂದೆ ಆಸ್ಟ್ರಿಯದಲ್ಲಿ ನೆಲೆಸಿದ್ದಾಗ ಕ್ರೈಸ್ತಮತವನ್ನು ಅವಲಂಬಿಸಿದರು. ಈ ಎಲ್ಲ ಸಂದರ್ಭಗಳಲ್ಲಿ ಜರ್ಮನ್ ಭಾಷೆಯನ್ನಾಡುವ ಮತಪ್ರಚಾರಕರಿಂದ ಕ್ರೈಸ್ತಧರ್ಮ ಪ್ರಸಾರವಾಯಿತೇ ಹೊರತು ರೋಮ್ ಸಾಮ್ರಾಜ್ಯದಿಂದ ಬಂದ ಮತಪ್ರಚಾರಕರಿಂದಲ್ಲ. ವಿಸಿಗಾತ್ ಪಾದ್ರಿಗಳು ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದರು.

	ಪ್ರಾರಂಭದಲ್ಲಿ ಎಲ್ಲ ಜರ್ಮನ್ ಬಣಗಳೂ ಕ್ರೈಸ್ತಧರ್ಮದ ಏರಿಯನ್ ಪಂಥವನ್ನು ಅನುಸರಿಸಿದುವು. ಕ್ಲೋವಸ್ ಅರಸನ ನಾಯಕತ್ವದಲ್ಲಿ ಫ್ರ್ಯಾಂಕರು 496ರಲ್ಲಿ ಮತ್ತು ಸಿಗಸ್‍ಮಂಡ್ ಅರಸನ ಕಾಲದಲ್ಲಿ ಬರ್ಗಂಡಿ ಜನ ಕ್ಯಾತೊಲಿಕ್ ಧರ್ಮವನ್ನು ಸ್ವೀಕರಿಸುವವರಿಗೆ ಪ್ರಮುಖ ಜರ್ಮನ್ ಬಣಗಳು ಯಾವುವೂ ಕ್ಯಾತೊಲಿಕ್ ಧರ್ಮಪಂಥವನ್ನು ಅವಲಂಬಿಸಿರಲಿಲ್ಲ. ಕ್ಯಾತೊಲಿಕ್ ಧರ್ಮಕ್ಕೆ ಬದಲಾಗಿ ಆರಿಡ್ ಪಂಥವನ್ನು ಜರ್ಮನರು ಏಕೆ ಅನುಸರಿಸಿದರೆಂಬುದಕ್ಕೆ ಕಾರಣಗಳು ತಿಳಿದು ಬಂದಿಲ್ಲ. ಏರಿಯನ್ ಪಂಥದ ಜರ್ಮನರು ರಚಿಸಿದ ಧರ್ಮಗ್ರಂಥಗಳೆಲ್ಲ ದುರದೃಷ್ಟವಶಾತ್ ಕಾಣದಂತಾಗಿವೆ. ಬಿಷಪ್ ಯುಲ್‍ಫ್‍ಲಾಸ್ ಭಾಷಾಂತರಿಸಿದ ಬೈಬಲ್‍ಗ್ರಂಥದ ಅವಶೇಷ ಭಾಗಗಳು, ಸೇಂಟ್ ಜಾನನ ಧರ್ಮಬೋಧೆಯ ಬಗ್ಗೆ ಗಾತಿಕ್ ಭಾಷೆಯಲ್ಲಿ ಅನಾಮಿಕ ಗ್ರಂಥಕರ್ತನೊಬ್ಬ ಬರೆದ ವ್ಯಾಖ್ಯಾನ ಮತ್ತು ಅದೇ ಭಾಷೆಯಲ್ಲಿ ರಚಿತವಾದ ಚರ್ಚ್ ಕ್ಯಾಲೆಂಡರಿನ (ಪಂಚಾಗದ) ಚೂರುಪಾರುಗಳ ಹೊರತು ಮತ್ತಾವ ದಾಖಲೆಗಳೂ ಸಿಕ್ಕಿಲ್ಲ. ಜರ್ಮನರ ಮತಧರ್ಮಶಾಸ್ತ್ರ ಬೈಬಲ್ ಗ್ರಂಥದ ಅಕ್ಷರಶಃ ಅರ್ಥ ವಿವರಣೆಗಳಿಂದ ಕೂಡಿದ್ದು ನೀತಿಬೋಧೆಯತ್ತ ಗಮನ ಹರಿಸಿಲ್ಲ. ಏನೇ ಆಗಲಿ, ರೋಮ್ ಸಾಮ್ರಾಜ್ಯದ ಗಡಿಯ ಹೊರಗಣ ಅನಾಗರಿಕ ಜರ್ಮನರು ತಮ್ಮ ನಡುವೆ ಜೀವಿಸುತ್ತಿದ್ದ ಕ್ರೈಸ್ತರಿಗೆ ಕಿರುಕುಳ ಕೊಟ್ಟರೂ ಏರಿಯನ್ ಪಂಥದ ಜರ್ಮನ್ ಅರಸರು ಕ್ಯಾತೊಲಿಕ್ ಜನ ಮತ್ತು ಯಹೂದ್ಯರ ಬಗ್ಗೆ ಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಕಾಲಕ್ರಮದಲ್ಲಿ ಕ್ರೈಸ್ತಧರ್ಮವನ್ನು ಸ್ವೀಕರಿಸಿದ ಉಳಿದ ಜರ್ಮನ್ ಜನಾಂಗಗಳಿವು : 8ನೆಯ ಶತಮಾನದ ಉತ್ತರಾರ್ಧದಲ್ಲಿ ಹಳೆಯ ಸ್ಯಾಕ್ಸನ್ ಜನ ; 10ನೆಯ ಶತಮಾನದಲ್ಲಿ ಸ್ಕ್ಯಾಂಡಿನೇವಿಯ ಜನ; 7ನೆಯ ಶತಮಾನದಲ್ಲಿ ಇಂಗ್ಲೆಂಡಿನ ಸ್ಯಾಕ್ಸನ್ ಜನ. ಐಸ್‍ಲೆಂಡಿನಲ್ಲಿ ಕ್ರಿ. ಶ. 1,000ರಲ್ಲಿ ಕ್ರೈಸ್ತಧರ್ಮ ಪ್ರಚಾರವಾಯಿತು.											(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ